ಪಾಮೀ
ಏಕದಳ ಸಸ್ಯಗಳ ಗುಂಪಿಗೆ ಸೇರಿದ ಕುಟುಂಬ. ಅರಿಕೇಸೀ ಪರ್ಯಾಯ ನಾಮ. ತಾಡವೃಕ್ಷ ಅಥವಾ ತಾಳೆಮರಗಳ ಕುಟುಂಬ ಎಂಬ ಹೆಸರೂ ಇದೆ. ಇದರಲ್ಲಿ ಸುಮಾರು 150 ಜಾತಿಗಳು 200 ಪ್ರಭೇದಗಳು ಇವೆ. ಇವು ಹೆಚ್ಚಾಗಿ ಉಷ್ಣಪ್ರದೇಶಗಳಲ್ಲಿ ಬೆಳೆಯುವಂಥವು.

ಈ ಕುಟುಂಬದ ಸಸ್ಯಗಳು ಹೆಚ್ಚಾಗಿ ಪೊದೆಗಳು ಮತ್ತು ಮರಗಳು. ಕೆಲವು ಸಲ ಇತರ ಆಸರೆಗಳಿಗೆ ಬೆಳೆಯುವ ಬಳ್ಳಿಗಳಾಗಿಯೂ ಇರಬಹುದು. ಈ ಸಸ್ಯಗಳಲ್ಲಿ ಬಿಳಲು ರೀತಿಯ ಬೇರುಗಳನ್ನು ಕಾಣಬಹುದು. ಕಾಂಡ ದಪ್ಪವಾಗಿಯೊ ತೆಳುವಾಗಿಯೊ ಇರುತ್ತದೆ; ಹಾಗೂ ನೆಟ್ಟಗೆ ಬೆಳೆಯುತ್ತದೆ. ಆದರೆ ಕವಲೊಡೆಯುವುದಿಲ್ಲ. ಕಾಂಡದ ಮೇಲಿರುವ ಎಲೆಗಳು ಉದುರಿದ ಅನಂತರ ಅವುಗಳ ಬುಡದ ಗುರುತು ಉಳಿದು ಹೋಗುತ್ತದೆ. ಕೆಲವು ಗಿಡಗಳಲ್ಲಿ ಕಾಂಡದ ಎತ್ತರ ಸುಮಾರು 45 ಮೀ. ಕಾಂಡ ಬಹಳ ನಿಧಾನವಾಗಿ ದಪ್ಪವಾಗುತ್ತದೆ. ಎಲೆಗಳು ಬಹಳ ದೊಡ್ಡಗಾತ್ರದವು. ಇವು ಸಾಮಾನ್ಯವಾಗಿ ಕಾಂಡದ ತುದಿಯಲ್ಲಿ ಕಿರೀಟೋಪಾದಿಯಲ್ಲಿ ಹರಡಿಕೊಂಡಿರುತ್ತವೆ. ಇವುಗಳ ಆಕಾರ ಹಸ್ತದಂತೆ ಇಲ್ಲವೆ ಹಕ್ಕಿಗಳ ಗರಿಗಳಂತೆ. ನಾರಿನಿಂದ ಕೂಡಿದ ಎಲೆಗಳ ತಳಭಾಗ ಹರಡಿಕೊಂಡು ಎಲೆಗಳು ಕಾಂಡವನ್ನು ಭದ್ರವಾಗಿ ಹಿಡಿದುಕೊಳ್ಳಲು ಸಹಾಯ ಮಾಡುತ್ತವೆ.

ಹೂಗೊಂಚಲು ಸಾಮಾನ್ಯವಾಗಿ ಬಹಳ ದೊಡ್ಡದು ಹಾಗೂ ಕವಲೊಡೆದಿರುವಂಥದು. ಎಲೆಗಳ ಕಂಕುಳಿನಲ್ಲಿ ಹುಟ್ಟುತ್ತದೆ. ಇದಕ್ಕೆ ಸ್ಪೇಡಿಕ್ಸ್ ಎಂದು ಹೆಸರು. ಹೂಗೊಂಚಲಿನ ಸುತ್ತ 1 ಅಥವಾ 2 ದಪ್ಪವಾದ, ದೋಣಿಯಾಕಾರದ ಹೊದಿಕೆ (ಸ್ಪೇದ್) ಉಂಟು. ಹೂಗಳಿಗೆ ತೊಟ್ಟಿಲ್ಲ. ಕೆಲವು ಸಲ ಹೂಗೊಂಚಲಿನ ದಿಂಡಿನ ಮೇಲೆ ಹೂಗಳೂ ಹೂತು ಹೋದಂತೆ ಅಂಟಿರುವುವು. ಹೂಗಳು ಏಕಲಿಂಗಿಗಳು ಮತ್ತು ಅಸಂಪೂರ್ಣ ಮಾದರಿಯವು. ಪ್ರತಿಹೂವಿನಲ್ಲಿ 6 ಪೆರಿಯಾಂತ್ ಹಾಲೆಗಳು, 3-6 ಕೇಸರಗಳು 3 ಕಾರ್ಪೆಲುಗಳಿಂದ ರಚಿತವಾದ ಉಚ್ಚಸ್ಥಾನದ ಅಂಡಾಶಯ ಇವೆ. ಅಂಡಕೋಶದಲ್ಲಿ 3 ಕೋಣೆಗಳುಂಟು. ಪ್ರತಿ ಕೋಣೆಯಲ್ಲಿ 1-2 ಅಂಡಕಗಳಿವೆ.

ಫಲ ರಸಭರಿತ ಡ್ರೂಪ್ ಮಾದರಿಯದು. ಈ ಕುಟುಂಬ ಆರ್ಥಿಕ ಪ್ರಾಮುಖ್ಯವುಳ್ಳ ಅನೇಕ ಸಸ್ಯಗಳನ್ನು ಒಳಗೊಂಡಿದೆ. ಉದಾಹರಣೆಗೆ ಅಡಿಕೆ, ತೆಂಗು, ಖರ್ಜೂರ, ತಾಳೆ, ಈಚಲು ಇತ್ಯಾದಿ. ಮೆಟ್ರೋeóÉೈಲಾನ್ ಎಂಬ ಗಿಡದ ಕಾಂಡದಲ್ಲಿ ಬಹಳ ಪಿಷ್ಟವಿರುತ್ತದೆ. ಇದನ್ನು ಕಾಂಡದಿಂದ ಬೇರ್ಪಡಿಸಿ ಸೀಮೆಅಕ್ಕಿ ಎಂದು ಉಪಯೋಗಿಸುವುದುಂಟು. ಅಥವಾ ಹುದುಗುವಿಕೆಯ ರೀತಿಯಿಂದ ಮತ್ತು ಬರಿಸುವ ಪಾನೀಯವನ್ನು ತಯಾರಿಸಲಾಗುತ್ತದೆ. ದಿಮ್ಮಿಗಳನ್ನು ಮನೆಕಟ್ಟಲು ಬಳಸುವುದಿದೆ. ಎಲೆಗಳನ್ನು ಗುಡಿಸಲುಗಳಿಗೆ ಹೊದಿಸಲು, ಬುಟ್ಟಿ ಟೋಪಿಗಳನ್ನು ಮಾಡಲು ಬಳಸಲಾಗುತ್ತದೆ. ಚಾಪೆಗಳನ್ನೂ ತಯಾರಿಸುವುದುಂಟು. ತೆಂಗಿನ ನಾರಿನಿಂದ ಹಗ್ಗಗಳನ್ನು ತಯಾರಿಸುವರು. ತೆಂಗಿನ ಭ್ರೂಣಾಹಾರದಿಂದ ಎಣ್ಣೆಯನ್ನು ಪಡೆಯುವರು. ಇನ್ನು ಕೆಲವು ಬಗೆಯ ತಾಳೆ ಮರಗಳು ಅಲಂಕಾರಸಸ್ಯಗಳಾಗಿ ಜನಪ್ರಿಯವಾಗಿವೆ. ಉದಾಹರಣೆಗೆ ರಾಜತಾಳೆ, ಕೊಕೊತ್ರಿನ್ಯಾಕ್ಸ್, ಓರಿಯೊಡಾಕ್ಸ, ಕಾರಿಫ, ಕ್ಯಾರಿಯೋಟ, ಬೊರ್ಯಾಸಸ್ ಇತ್ಯಾದಿ. ಇವುಗಳ ಪೈಕಿ ಕಾರಿಫ ಅಂಬ್ರಾಕ್ಯುಲಿಫೆರ ಪ್ರಭೇದ ತಾಳೆಗರಿಮರವೆಂದು ಹೆಸರಾಗಿದ್ದರೆ ಕ್ಯಾರಿಯೋಟ ಯುರೆನ್ಸ್ ಎಂಬುದು ಬಗನಿ (ಬೈನೆ) ಮರವೆಂದೂ, ಬೋರ್ಯಾಪಸ್ ಫ್ಲಾಬೆಲಿಫೆರ್ ಎಂಬುದು ತಾಟಿನುಂಗು ಎಂಬ ಹೆಸರಿನಿಂದಲೂ ಪರಿಚಿತವಾಗಿವೆ. ಇವೆಲ್ಲವೂ ಒಂದು ಬಗೆಯಲ್ಲಿ ಆರ್ಥಿಕವಾಗಿ ಉಪಯುಕ್ತವೆನಿಸಿವೆ.
(ಕೆ.ಜಿಎ.)
(ಪರಿಷ್ಕರಣೆ : ಕೆ ಬಿ ಸದಾನಂದ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ